ಭೂಖಂಡಗಳ ನಿರ್ಮಾಣ

	ಭೂತಲದ 29% ಭಾಗ ಮಾತ್ರ ಭೂಖಂಡಗಳು ಆವರಿಸಿದ್ದು ಉಳಿದ 71% ಭಾಗ ಜಲಮಯವಾಗಿದೆ. ಭೂಮಿಯಲ್ಲಿ ಎದ್ದು ಕಾಣುವ ಉಬ್ಬುತಗ್ಗುಗಳೆಂದರೆ ಭೂಖಂಡಗಳು ಮತ್ತು ಸಾಗರಗಳು. ಖಂಡಗಳ ಸರಾಸರಿ ಎತ್ತರ 825 ಮೀ. ಸಾಗರದ ಸರಾಸರಿ ಆಳ 3780 ಮೀ. ಯೂರೊಪ್ ಖಂಡದ ಸರಾಸರಿ ಎತ್ತರ 350 ಮೀ, ಉತ್ತರ ಅಮೆರಿಕ ಖಂಡದ್ದು 800 ಮೀ, ಏಷ್ಯಾ ಖಂಡದ್ದು 975 ಮೀ.

	ಭೂಮಿಯ ಕೆಲವು ಭಾಗಗಳು ಮಾತ್ರ ಮೇಲಕ್ಕೆ ಚಾಚಿಕೊಂಡಿವೆ. ಉಳಿದ ಭಾಗಗಳೇಕೆ ಕಡಲ ನೀರಿನಲ್ಲಿ ಮುಳುಗಿವೆ? ಇವುಗಳ ಅಡಿಯಲ್ಲಿರುವ ಶಿಲೆಯ ಸಾಂದ್ರತೆಯೇ ಇದರ ಕಾರಣ. ಖಂಡಗಳ ಶಿಲೆಗಳು ಹಗುರ; ಸಾಗರ ತಲದ ಶಿಲೆಗಳು ಇವುಗಳಿಗಿಂತ ತೂಕ. ಆಯಾ ಪ್ರದೇಶಗಳ ವಸ್ತು ಮತ್ತು ರಚನೆಗಳಲ್ಲಿ ಬಹಳ ವ್ಯತ್ಯಾಸ ಉಂಟು. ಹಗುರವಾಗಿರುವ ಖಂಡದ ಶಿಲೆಗಳು ತಲದಲ್ಲಿರುವ ಬಸಾಲ್ಟ್ ಶಿಲಾಸಾಗರದಲ್ಲಿ ಮಂಜುಗಡ್ಡೆಗಳಂತೆ ತೇಲುತ್ತಿವೆ ಎಂದು ವರ್ಣಿಸಬಹುದು. ಇವುಗಳ ವ್ಯತ್ಯಾಸ ಮೂಲಭೂತವಾದುದು. ಇವನ್ನು ಪರಸ್ಪರ ವಿನಿಮಯ ಮಾಡಲಾಗುವುದಿಲ್ಲ. ಆದ್ದರಿಂದ ಖಂಡಗಳ ನಡುವೆ ಭೂಸೇತುವೆಗಳಿದ್ದುವು, ಅವು ಈಚೆಗೆ ಮುಳುಗಿಹೋಗಿವೆ ಎಂಬ ವಾದಕ್ಕೆ ಆಧಾರವಿಲ್ಲ.

	ದಕ್ಷಿಣ ಗೋಳಾರ್ಧದ ನಾನಾ ಭಾಗಗಳಲ್ಲಿಯ ಶಿಲೆಗಳಲ್ಲಿರುವ ಅವಶೇಷಗಳಿಂದ ಅವೆಲ್ಲ ಹಿಂದೆ ತೀರ ಸಮೀಪವಾಗಿದ್ದು ಈಚೆಗೆ ದೂರಸರಿದಿವೆ ಎಂದು ತಿಳಿದು ಬರುತ್ತದೆ. ಗ್ಲಾಸಾಪ್ಟೆರಿಸ್ ಎಂಬ ಸಸ್ಯದ ಮತ್ತು ಹಿಮಯುಗದ ಶಿಲೆಯ ಆಧಾರದಿಂದ ಭೂವಿಜ್ಞಾನಿಗಳು ಈ ನಿರ್ಣಯ ಮಾಡಿದ್ದಾರೆ. ಆಫ್ರಿಕಾಖಂಡ ಈಶಾನ್ಯದ ಕಡೆಗೆ ಸಂಚರಿಸಿದ್ದರಿಂದ ಟೆಥಿಸ್ ಎಂಬ ಸಮುದ್ರದಲ್ಲಿ ಶೇಖರವಾದ ಪದರಶಿಲೆಗಳು ಮಡಿಕೆ ಪರ್ವತಗಳಾಗಿ ಹಿಮಾಲಯ ಪರ್ವತಗಳ ರಚನೆಯಾಯಿತು ಎಂದು ಎಡ್ವರ್ಡ್ ಸೂಯೆಸ್ ಎಂಬ ವಿಜ್ಞಾನಿ ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದು. ವೆಗೆನರ್ ಎಂಬ ಭೂವಿಜ್ಞಾನಿ ಇದನ್ನು ಪುಷ್ಟೀಕರಿಸಿದ. ಖಂಡಗಳ ಅಲೆತ (ಕಾಂಟಿನೆಂಟಲ್ ಡ್ರಿಫ್ಟ್) ಎಂಬ ಹೆಸರಿನ ವಾದಕ್ಕೆ ಕೊಂಚ ಕಾಲ ಬೆಂಬಲವಿರಲಿಲ್ಲ. ಈಗ ಹೊಸದಾಗಿ ಲಭ್ಯವಾಗಿರುವ ಪ್ರಾಕ್ಕಾಂತತ್ವ ಮುಂತಾದ ಪ್ರಮಾಣಗಳ ಆಧಾರದಿಂದ ಖಂಡಗಳು ನಿಧಾನವಾಗಿ ಅಲೆಯುತ್ತಿವೆ. ಈ ಅಲೆತಕ್ಕೆ ಬೇಕಾದ ಶಕ್ತಿ ವಿಕಿರಣ ಪಟು ಖನಿಜಗಳ ಕಾವಿನಿಂದ ಬರುತ್ತಿದೆ ಎನ್ನುಬಹುದು.

	ಖಂಡಗಳು ಹಿಂದೆ ಈಗಿನಂತೆ ಇರಲಿಲ್ಲ. ಅತ್ಯಂತ ಪ್ರಾಚೀನಕಾಲದ ಸುರಕ್ಷಿತ ಪ್ರದೇಶಗಳ, ಉದಾಹರಣೆಗೆ ದಕ್ಷಿಣ ಭಾರತದ ಬಳಿ ನೀಳಕಡಲಿನ ಪ್ರದೇಶಗಳಲ್ಲಿ ಅನೇಕ ಕೋಟಿ ವರ್ಷ ಕಾಲ ಪದರ ಶಿಲೆಗಳ ಸಂಚಯವಾಗಿದೆ. ಇವು ಭೂಮಿಯ ಬಲಗಳಿಂದ ಮಡಿಸಲ್ಪಟ್ಟು ಎತ್ತರ ಪರ್ವತಗಳಾಗಿವೆ. ಹೀಗೆ ಭೂಭಾಗ ವಿಸ್ತಾರ ಕ್ರಮೇಣ ಹೆಚ್ಚುತ್ತ ಬಂದಿದೆ ಎಂದು ತಿಳಿದುಬರುತ್ತದೆ. ಖಂಡಗಳ ಸವೆತದಿಂದ ಹೊಸ ಶಿಲೆಗಳು ಉತ್ಪತ್ತಿಯಾಗುತ್ತವೆ. ಅವು ಗಟ್ಟಿಗೊಂಡು ಪರ್ವತಗಳಾಗಿ ಮಾರ್ಪಡುತ್ತವೆ. ಶಿಲೆಗಳ ಕ್ಷಯ ಮತ್ತು ಸಂಚಯನ ಎಡಬಿಡದೆ ಸುಮಾರು 300-400 ಕೋಟಿ ವರ್ಷಗಳಿಂದ ಹೆಚ್ಚು ಕಡಿಮೆ ಇಂದಿನ ವೇಗದಲ್ಲಿಯೇ ಆಗುತ್ತಿದೆ ಎಂದು ತಿಳಿದು ಬಂದಿದೆ.	
(ಎಂ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ